ಪಣಿಕ್ಕರ್, ಕಾವಲಂ ಮಾಧವ -
ವಿದ್ವಾಂಸ, ಗ್ರಂಥಕರ್ತ, ಶಿಕ್ಷಣತಜ್ಞ, ರಾಜತಾಂತ್ರಿಕ, ಇತಿಹಾಸಕಾರ. ಜನನ 1895ರ ಜೂನ್ 3 ರಂದು, ಆಗಿನ ತಿರುವಾಂಕೂರು ಸಂಸ್ಥಾನದಲ್ಲಿ ; ಮರಣ 1963ರ ಡಿಸೆಂಬರ್ 10ರಂದು, ಮೈಸೂರಿನಲ್ಲಿ.

ಸುಸಂಸ್ಕøತ ನಾಯರ್ ಕುಲದಲ್ಲಿ ಹುಟ್ಟಿದ ಪಣಿಕ್ಕರರು ಪ್ರಾರಂಭದಲ್ಲಿ ತಿರುವಾಂಕೂರು ಮತ್ತು ಮದರಾಸಿನಲ್ಲಿ ವಿದ್ಯಾಭ್ಯಾಸಮಾಡಿ, ಮುಂದೆ ಆಕ್ಸ್‍ಫರ್ಡ ವಿಶ್ವವಿದ್ಯಾಲಯದಲ್ಲಿ ಓದಿ, ಲಂಡನ್ನಿನ ಮಿಡ್‍ಲ್ ಟೆಂಪ್‍ಲ್‍ನಲ್ಲಿ ಬ್ಯಾರಿಸ್ಟರ್ ಪರೀಕ್ಷೆ ಮುಗಿಸಿ (1914-18) ಭಾರತಕ್ಕೆ ಮರಳಿದರು. ಅಲ್ಲಿ ಮೊದಲು ಅಲೀಗಢ ವಿಶ್ವವಿದ್ಯಾಲಯದಲ್ಲಿ, ಅನಂತರ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಇತಿಹಾಸವನ್ನು ಬೋಧಿಸಿದರು. ಪ್ರಾರಂಭದಿಂದಲೂ ಪತ್ರಿಕಾ ವ್ಯವಸಾಯದಲ್ಲಿ ಆಸಕ್ತಿ ವಹಿಸಿ, ಟೈಮ್ಸ್ ಮತ್ತು ಮ್ಯಾಂಚೆಸ್ಟರ್ ಗೌರ್ಡಿಯನ್ ಪತ್ರಿಕೆಗಳಿಗೆ ಬರೆಯುತ್ತಿದ್ದ ಇವರು ಮದರಾಸಿನಲ್ಲಿ ಪ್ರಾರಂಭವಾದ ರಾಷ್ಟ್ರೀಯತಾವಾದಿ ಸ್ವರಾಜ್ಯ ಪತ್ರಿಕೆಗೂ ಅನಂತರ 1925ರಲ್ಲಿ ಹಿಂದೂಸ್ತಾನ್ ಟೈಮ್ಸ್ (ದೆಹಲಿ) ಪತ್ರಿಕೆಗೂ ಸಂಪಾದಕರಾಗಿ ಕೆಲವು ವರ್ಷ ಕೆಲಸ ಮಾಡಿದರು.

ಮಹಾತ್ಮ ಗಾಂಧಿಯವರ ಪರವಾಗಿ ನಾಭಾ ಸಂಸ್ಥಾನದ ಮಹಾರಾಜರೊಡನೆ ಸಂಧಾನ ನಡೆಸುವುದರೊಂದಿಗೆ ಪಣಿಕ್ಕರರ ರಾಜತಾಂತ್ರಕ ಜೀವನ ಪ್ರಾರಂಭವಾಯಿತು. ಸಂಸ್ಥಾನ ರಾಜಕಾರಣ ಇವರನ್ನು ಅನಂತರ ಸೆಳೆಯಿತು. ಇವರು ಕಾಶ್ಮೀರ ಸಂಸ್ಥಾನದಲ್ಲಿ ಸಲಹೆಗಾರರಾದರು. ದುಂಡು ಮೇಜಿನ ಪರಿಷತ್ತಿನಲ್ಲಿ ಸಂಸ್ಥಾನಿಕ ಮಂಡಳಿಯ ಕಾರ್ಯದರ್ಶಿಯಾಗಿಯೂ ಭಾರತೀಯ ಸಂಸ್ಥಾನಾಧೀಶ್ವರ ಮಂಡಳಿಯ ಚೌನ್ಸಲರರ ಕಾರ್ಯದರ್ಶಿಯಾಗಿಯೂ ಇದ್ದರು. ಪಟಿಯಾಲದಲ್ಲೂ ಬಿಕಾನೇರ್ ಸಂಸ್ಥಾನದಲ್ಲೂ ವಿದೇಶ ಮಂತ್ರಿಯಾಗಿ ಕೆಲಸ ಮಾಡಿದರು ಇವರು ಬಿಕಾನೇರ್‍ನ ಮುಖ್ಯಮಂತ್ರಿಯಾಗಿಯೂ ಇದ್ದರು. ಭಾರತ ಸ್ವತಂತ್ರವಾದ ಮೇಲೆ ವಿಶ್ವ ಸಂಸ್ಥೆಯ ಮಹಾ ಸಭೆಗೆ ಭಾರತದ ಪ್ರತಿನಿಧಿಗಳಲ್ಲೊಬ್ಬರಾಗಿ ಹೋಗಿದ್ದರು. ಅನಂತರ ಚೀನದಲ್ಲಿ ಭಾರತದ ಪ್ರಥಮ ರಾಯಭಾರಿಯಾಗಿ (1948-52), ಅಲ್ಲಿ ಕಮ್ಯೂನಿಸ್ಟ್ ಚೀನದ ಬಗ್ಗೆ ಭಾರತದ ನೀತಿಯನ್ನು ರೂಪಿಸುವ ಕೆಲಸದಲ್ಲಿ ನೆರವಾದರು. ಈಜಿಪ್ಟಿನಲ್ಲೂ (1952-53) ಫ್ರಾನ್ಸಿನಲ್ಲೂ (1956-59) ಇವರು ಭಾರತದ ರಾಯಭಾರಿಯಾಗಿದ್ದರು. 1954-56ರಲ್ಲಿ ಇವರು ಭಾರತ ರಾಜ್ಯ ಪುನರ್ಘಟನಾ ಆಯೋಗದ ಸದಸ್ಯರಾಗಿದ್ದರು. ಸ್ವಲ್ಪಕಾಲ ಭಾರತದ ರಾಜ್ಯ ಸಭೆಯ ಸದಸ್ಯರೂ ಆಗಿದ್ದ ಪಣಿಕ್ಕರರು ತಮ್ಮ ಇಳಿವಯಸ್ಸಿನಲ್ಲಿ ಮತ್ತೆ ಶಿಕ್ಷಣ ರಂಗವನ್ನು ಪ್ರವೇಶಿಸಿ ಜಮ್ಮು-ಕಾಶ್ಮೀರ ವಿಶ್ವವಿದ್ಯಾಯದಲ್ಲೂ ಅನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲೂ ಕುಲಪತಿಗಳಾಗಿದ್ದರು.

ಪಣಿಕ್ಕರರು ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 45ಕ್ಕಿಂತಲೂ ಹೆಚ್ಚ ಗ್ರಂಥಗಳನ್ನು ಬರೆದಿದ್ದಾರೆ. ಮಲಯಾಳಂ ಭಾಷೆಯಲ್ಲಿ ಕವಿ, ನಾಟಕಕಾರ, ಕಾದಂಬರಿಕಾರ, ಚಿಂತಕ ಮತ್ತು ಸಾಹಿತ್ಯ ವಿಮರ್ಶಕರಾಗಿದ್ದ ಇವರು ಕೇರಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಇವರ ಮಲಯಾಳಂ ಆತ್ಮ ಚರಿತ್ರೆ ಮತ್ತು ಇತರ ಕೆಲವು ಕೃತಿಗಳು ಇಂಗ್ಲಿಷಿಗೆ ಅನುವಾದವಾಗಿವೆ. ಇಂಗ್ಲಿಷಿನಲ್ಲಿ ಇತಿಹಾಸಕ ಸಮಾಜಶಾಸ್ತ್ರ, ರಕ್ಷಣೆ ಮೊದಲಾದ ವಿಷಯಗಳಲ್ಲಿ ಇವರು ಬರೆದ 20ಕ್ಕಿಂತಲೂ ಹೆಚ್ಚು ಗ್ರಂಥಗಳ ಪೈಕಿ ಏಷ್ಯ ಅಂಡ್ ವೆಸ್ಟರ್ನ್ ಡಾಮಿನೆನ್ಸ್, ಮಲಬಾರ್ ಅಂಡ್ ದಿ ಪೋರ್ಚುಗೀಸ್, ಮಲಬಾರ್ ಅಂಡ್ ದಿ ಡಚ್, ದಿ ಬ್ರಿಟಿಷ್ ಕ್ರೌನ್ ಅಂಡ್ ಇಂಡಿಯನ್ ಸ್ಟೇಟ್ಸ್, ಎ ಸರ್ವೆ ಆಫ್ ಇಂಡಿಯನ್ ಹಿಸ್ಟೊರಿ, ಇಂಡಿಯ ಅಂಡ್ ದಿ ಇಂಡಿಯನ್ ಓಷನ್, ಪ್ರಾಬ್ಲೆಮ್ಸ್ ಆಫ್ ಇಂಡಿಯನ್ ಡಿಫೆನ್ಸ್, ಜಿಯೋಗ್ರಾಫಿಕಲ್ ಫ್ಯಾಕ್ಟರ್ಸ್ ಇನ್ ಇಂಡಿಯನ್ ಹಿಸ್ಟೊರಿ, ಕ್ಯಾಸ್ಟ್ ಅಂಡ್ ಡೆಮಾಕ್ರಸಿ, ಇನ್ ಟೂ ಚೈನಾಸ್- ಇವು ಮುಖ್ಯವಾಗಿವೆ. ಇವರನ್ನು ಲಂಡನ್ನಿನ ರಾಯಲ್ ಇಂಡಿಯನ್ ಸೊಸ್ಶೆಟಿಯ ಉಪಾಧ್ಯಕ್ಷರಾಗಿ ಆರಿಸಲಾಗಿತ್ತು. (ಪಿ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ